ಪ್ರಸ್ತಾವನೆ:
ಕರ್ನಾಟಕದ ವಿಶಿಷ್ಟ ಕಲೆ ಯಕ್ಷಗಾನ, ಇದರ ವಿಶಿಷ್ಟತೆ ಇರುವುದು ಸಂಭಾಷಣೆಯಲ್ಲಿ, ಇದರ ಸಂಭಾಷಣೆ ಎನ್ನುವುದು ಆಶು ಆಗಿದೆ, ಪ್ರಪಂಚದ ಇನ್ನಾವ ಕಲೆಯಲ್ಲಿಯೂ ಆಶು ಸಂಭಾಷಣೆ ಇಲ್ಲ, ಪ್ರದರ್ಶನದ ಜಾಗ, ಸಮಯ, ಕಲಾವಿದನ ಮನಃಸ್ಥಿತಿಯನ್ನು ಅವಲಂಬಿಸಿ ಕತಾಹಂದರವನ್ನು ಕಟ್ಟುತ್ತ ಸಾಗುವುದು ಇದರ ವೈಶಿಷ್ಟ್ಯ. ಅಂಥಹ ಕಲೆಗೆ ಅಳಿಲು ಸೇವೆ ಸಲ್ಲಿಸಲು ಪ್ರಾರಂಭಿಸಿದ ಸಂಸ್ಥೆ ನಿರ್ಮಾಣ್ ಯಕ್ಷ ಬಳಗ (ರಿ).
ಸಂಸ್ಥೆಯ ಕುರಿತು:
ಸಂಸ್ಥೆಯನ್ನು ಪ್ರಾರಂಭಿಸಬೇಕು, ದೇಶಾದ್ಯಂತ ಕಾರ್ಯಕ್ರಮ ಕೊಟ್ಟು ಕಲೆಯ ಪ್ರಸರಣಕ್ಕೆ ಒಂದಿಷ್ಟು ಕೈ ಜೋಡಿಸಬೇಕು ಎಂದು ಸಮಾನ ಮನಸ್ಕರು ಸೇರಿ 8 ವರ್ಷಗಳ ಹಿಂದೆ ಸ್ಥಾಪಿಸಿದ ತಂಡ, ಆದರೆ ಇದನ್ನು ವೃತ್ತಿಯಾಗಿಸಿಕೊಳ್ಳದೆ ಹವ್ಯಾಸವನ್ನಾಗಿಸಿ ಕಡಿಮೆ ವೆಚ್ಚದಲ್ಲಿ ಯಕ್ಷಗಾನ ಪ್ರದರ್ಶನಗಳನ್ನು ನೀಡುತ್ತ ಬಂದೆವು, ಈಗ ಮೂರು ವರ್ಷದ ಹಿಂದೆ ಇದಕ್ಕೆ ಒಂದು ಸಾಂಸ್ಥಿಕ ರೂಪವನ್ನು ಕೊಟ್ಟು ಅದನ್ನು ನೋಂದಣಿ ಮಾಡಿದೆವು. ನಂತರದ ದಿನಗಳಲ್ಲಿ ಬೆಂಗಳೂರು ನಗರ, ಗ್ರಾಮಾಂತರ ಮತ್ತು ಕೋಲಾರ ಜಿಲ್ಲೆಗಳಲ್ಲಿ ಅಷ್ಟೇ ಅಲ್ಲದೆ ಕರ್ನಾಟಕದ ಎಲ್ಲಾ ಕಡೆಗಳಲ್ಲಿ ಕಾರ್ಯಕ್ರಮಗಳನ್ನು ಕೊಡುತ್ತ ಬಂದಿದೆ. ನಗರ ಪ್ರದೇಶಕ್ಕಿಂತ ಗ್ರಾಮಾಂತರ ಪ್ರದೇಶಗಳಲ್ಲಿ ಸಂಸ್ಥೆ ಕೆಲಸ ಮಾಡುತ್ತ ಬಂದಿದೆ, ಯಕ್ಷಗಾನದ ಜೊತೆ ಜೊತೆಗೆ ಕಳೆದ ಒಂದು ವರ್ಷದಿಂದ ತಾಳಮದ್ದಲೆಯನ್ನು ಬೆಂಗಳೂರು ನಗರದಾದ್ಯಂತ ನೀಡುತ್ತ ಬಂದಿದೆ. ಕೇವಲ 7 ಜನರಿಂದ ಪ್ರಾರಂಭಿಸಿದ ಸಂಸ್ಥೆ ಈಗ 32 ಕಲಾವಿದರನ್ನು ಹೊಂದಿದೆ, ಜೊತೆಗೆ ತನ್ನದೆ ಆದ ವೇಷಭೂಷಣಗಳನ್ನು, ಹಿಮ್ಮೇಳದ ವಾದ್ಯಗಳನ್ನು ಹೊಂದಿ ಸದೃಢವಾಗಿದೆ. ಇಂದು ಪೌರಾಣಿಕವಾದ ಯಾವ ಕತೆಯನ್ನು ಕೇಳಿದರೂ ಆ ಕತೆಯನ್ನು ಪ್ರದರ್ಶಿಸುವಷ್ಟು ಬೆಳೆದಿದೆ. ಅರ್ಧ ಗಂಟೆಯಿAದ ಹಿಡಿದು ಇಡೀ ರಾತ್ರಿ ಪ್ರದರ್ಶನ ನೀಡುವಷ್ಟು ಸದೃಢವಾಗಿದೆ. ಕನ್ನಡದ ಕಂಪನ್ನು ಹರಡುವ ಕಾರ್ಯವನ್ನು ಬಹಳ ಆಸ್ಥೆಯಿಂದ ಮಾಡಿಕೊಂಡು ಬರುತ್ತಿದೆ.
ಕಲಾವಿದರ ಕುರಿತು:
ಸಂಸ್ಥೆಯ ಸಂಸ್ಥಾಪಕರಾದ ರವಿ ಐತುಮನೆ (ರವೀಂದ್ರ ಐ. ಎಸ್) ಇವರು ಸುಮಾರು 30 ವರ್ಷಗಳ ಅನುಭವವನ್ನು ಹೊಂದಿದ್ದಾರೆ, ಬಾಲ ಕಲಾವಿದರಾಗಿ ಬಣ್ಣ ಹಚ್ಚಿದ ಇವರು ಎಲ್ಲಾ ರೀತಿಯ ಪಾತ್ರಗಳನ್ನು ಅಂದರೆ ನಾಯಕ, ಪ್ರತಿನಾಯಕ, ಖಳನಾಯಕ, ಸ್ತ್ರೀ, ಹಾಸ್ಯ, ಸಹ ಪಾತ್ರಗಳನ್ನು ನಿರ್ವಹಿಸಿದ್ದಾರೆ, ಬಹುಶಃ ಇವರು 1000 ಕ್ಕೂ ಹೆಚ್ಚು ಪಾತ್ರಗಳನ್ನು ಮಾಡಿದ್ದಾರೆ, ನಾಲ್ಕು ವರ್ಷಗಳ ಕಾಲ ಕೇಂದ್ರ ಸರ್ಕಾರದ ಸಾಂಗ್ ಆಂಡ್ ಡ್ರಾಮ ವಿಭಾಗದ “ಏ” ದರ್ಜೆಯ ಕಲಾವಿದರಾಗಿ ದುಡಿದವರು, ಹಾಗೂ 2008 ರ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದರು, ಆಗಿನ ರಾಷ್ಟ್ರಪತಿಗಳಾಗಿದ್ದ ಶ್ರೀಮತಿ ಪ್ರತಿಭಾ ಪಾಟೀಲ್ ರವರ ಭವನದಲ್ಲಿ ಯಕ್ಷಗಾನ ಪ್ರದರ್ಶನ ನೀಡಿದ ಹೆಮ್ಮೆ ಇವರದ್ದು. ಈಗಾಗಲೆ ಹಲವು ಸಂಸ್ಥೆಗಳಿಂದ ಹಲವು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿದ್ದಾರೆ.
ಖಜಾಂಚಿಗಳಾದ ಆದಿತ್ಯ ಹೆಚ್.ಸಿ ಇವರು ಕೂಡ ಸುಮಾರು 20 ವರ್ಷಗಳಿಗಿಂತ ಹೆಚ್ಚು ಅನುಭವವನ್ನು ಹೊಂದಿದ್ದಾರೆ. ಇವರು ಎರಡು ವರ್ಷಗಳ ಕಾಲ ವೃತ್ತಿ ಮೇಳದಲ್ಲೂ ಸೇವೆ ಸಲ್ಲಿಸಿದ್ದಾರೆ, ಇವರು ಕೂಡ ನಾಯಕ, ಪ್ರತಿನಾಯಕ, ಖಳನಾಯಕ, ಸ್ತ್ರಿಪಾತ್ರಗಳಲ್ಲಿ ಅನುಭವವನ್ನು ಹೊಂದಿದ್ದಾರೆ. ಹಲವು ಸಂಘ, ಸಂಸ್ಥೆಗಳು ಇವರನ್ನು ಗುರುತಿಸಿ ಸನ್ಮಾನಿಸಿದ್ದಾರೆ.
ಗೌರವ ಸದಸ್ಯರಾದ ಬಾಲಕೃಷ್ಣ ಹೆಚ್.ಸಿ. ಇವರು ಸುದೀರ್ಘ 40 ವರ್ಷಕ್ಕಿಂತ ಹೆಚ್ಚು ವರ್ಷಗಳ ಅನುಭವದ ಖನಿ. ಇವರು ವೃತ್ತಿ ಮೇಳಗಳಲ್ಲಿ ಭಾಗವತರಾಗಿ, ಮದ್ದಲೆಗಾರರಾಗಿ, ಚಂಡೆಗಾರರಾಗಿ ಸೇವೆ ಗೈದರು, ನಂತರದಲ್ಲಿ ಸರ್ಕಾರಿ ಉದ್ಯೋಗದಲ್ಲಿದ್ದುಕೊಂಡೆ ಕಲಾಸೇವೆಯನ್ನು ಮುಂದುವರಿಸಿದರು, ಇವರೂ ಕೂಡ ಆರು ವರ್ಷಗಳ ಕಾಲ ಕೇಂದ್ರ ಸರ್ಕಾರದ ಸಾಂಗ್ ಆಂಡ್ ಡ್ರಾಮ ವಿಭಾಗದ “ಏ” ದರ್ಜೆಯ ಕಲಾವಿದರಾಗಿ ದುಡಿದವರು, ಕೇವಲ ಕರ್ನಾಟಕವಲ್ಲದೆ ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಯಕ್ಷಗಾನದ ಕಂಪನ್ನು ಪಸರಿಸುವ ಕಾರ್ಯವನ್ನು ಕೈಗೊಂಡವರು. ಸರ್ಕಾರಿ ಉದ್ಯೋಗದಿಂದ ನಿವೃತ್ತರಾದ ನಂತರದಲ್ಲಿ ಜೀವನವನ್ನು ಯಕ್ಷಗಾನಕ್ಕೆ ಮುಡಿಪಾಗಿಟ್ಟವರು, ಈಗ ಯಕ್ಷಗಾನ ಕೃತಿಗಳನ್ನು ರಚಿಸುತ್ತಿದ್ದಾರೆ. ಇವರಿಗೆ ಈಗಾಗಲೆ 100ಕ್ಕೂ ಹೆಚ್ಚು ಪ್ರಶಸ್ತಿ ಪುರಸ್ಕಾರಗಳು ಸಂದಿವೆ.
ಇದೇ ರೀತಿ ಸಂಸ್ಥೆಯ ಉಳಿದ ಕಲಾವಿದರೂ ಬಹಳಷ್ಟು ಅನುಭವಿಗಳಾಗಿದ್ದಾರೆ,
ಇಂಥಹ ನಮ್ಮ ಸಂಸ್ಥೆಯು ತಮ್ಮ ಸಂಸ್ಥೆಯ ವಿಶೇಷ ಸಂದರ್ಭದಲ್ಲಿ ಅಂದರೆ ಕನ್ನಡ ಹಬ್ಬ, ಗಣೇಶೋತ್ಸವ, ಸಾಂಸ್ಕೃತಿಕ ಹಬ್ಬ, ಕಾರ್ಮಿಕರ ಪುನಃಶ್ಚೇತನ ಶಿಬಿರ ಇತ್ಯಾದಿಗಳಲ್ಲಿ ಪ್ರದರ್ಶನಕ್ಕೆ ಸದಾ ಸಿದ್ಧವಿದ್ದು, ಕಾರ್ಯಕ್ರಮ ನೀಡಲು ಉತ್ಸುಕರಾಗಿರುತ್ತೇವೆ